ಬರ್ಝೀಲೀಯಸ್, ಜಾನ್ಸ್ ಜೇಕಬ್

1779-1848. ಸ್ವೀಡನ್ನಿನ ರಸಾಯನವಿಜ್ಞಾನಿ. ಜನನ 20-8-1779, ಮರಣ 7-8-1848. ಬಾಲ್ಯದಲ್ಲಿ ಇವನು ತಂದೆಯನ್ನು ಕಳೆದುಕೊಂಡ. ಅನಂತರ ತಾಯಿಯೂ ಹೆಚ್ಚುಕಾಲ ಬದುಕಲಿಲ್ಲ. ತಬ್ಬಲಿ ಹುಡುಗನ ಕಲಿಕೆ ಕುಂಟಿತು. ಹಣದ ಮುಗ್ಗಟ್ಟು ಮತ್ತು ಯಾರ ಹಂಗಿಗೂ ಬೀಳಬಾರದೆಂಬ ಸ್ವತಂತ್ರ ಮನೋವೃತ್ತಿ ಇವುಗಳ ದೆಸೆಯಿಂದ ಇವನು ವಿದ್ಯಾಭ್ಯಾಸವನ್ನು ಎಡೆಬಿಡದೆ ಮುಂದುವರಿಸಲಾಗಲಿಲ್ಲ. ಹಣಸಂಪಾದನೆಗಾಗಿ ಖಾಸಗಿ ಪಾಠಹೇಳಿ ಅನಂತರ ಕಲಿಕೆ ಮುಂದುವರಿಸುವುದು ಅನಿವಾರ್ಯವಾಯಿತು. ಸ್ವಭಾವತಃ ಬರ್ಝೀಲೀಯಸನಿಗೆ ನೈಸರ್ಗಿಕ ವಿದ್ಯಾಮಾನಗಳಲ್ಲಿ ಆಸಕ್ತಿಯಿದ್ದುದರಿಂದ ಇವನ ಗಮನ ವೈದ್ಯಕೀಯದ ಕಡೆಗೆ ಹರಿಯಿತು. ಉಪ್ಸಾಲಾದಲ್ಲಿ ವೈದ್ಯಕೀಯ ಶಿಕ್ಷಣವಾಯಿತು. ಅದರಲ್ಲಿ ಡಾಕ್ಟರೇಟ್ ಪದವಿಯನ್ನೂ ಗಿಟ್ಟಿಸಿದ. ಇದಕ್ಕಿಂತ ಮುಂಚೆ ವೈದ್ಯನೊಬ್ಬನ ಸಹಾಯಕನಾಗಿದ್ದಾಗ ಖನಿಜೋದಕಗಳನ್ನು ಕುರಿತು ಇವನು ಕಲೆಹಾಕಿದ್ದ ಫಲಿತಾಂಶಗಳನ್ನೆ ತನ್ನ ಡಾಕ್ಟರೇಟಿನ ಮಹಾಪ್ರಬಂಧಕ್ಕೆ ಬಳಸಿಕೊಂಡ. ಮುಂದೆ ಇವನಿಗೆ ಸ್ಟಾಕ್‍ಹೋಮಿನ ಶಸ್ತ್ರ ವೈದ್ಯಶಾಲೆಯೊಂದರಲ್ಲಿ ಗೌರವ ಅಧ್ಯಾಪಕರನ ಸ್ಥಾನಸಿಕ್ಕಿತು. ವೈದ್ಯವೃತ್ತಿಯಲ್ಲಿ ಜೀವನ ಸಾಗಿಸುವುದು ಕಷ್ಟವೆಂದು ತೋರಿದ್ದರಿಂದ ಈತ ಕೆಲವೊಂದು ದಿಢೀರ್ ಶ್ರೀಮಂತಿಕೆಯ ತಂತ್ರಗಳನ್ನು ಪ್ರಯೋಗಿಸಿದ. ಖನಿಜೋದಕಗಳನ್ನು ಸೀಸೆಗಳಲ್ಲಿ ತುಂಬಿ ಮೊಹರುಮಾಡಿ ಮಾರುವ ಒಂದು ಸಂಸ್ಥೆಯಲ್ಲಿ ಬಂಡವಾಳ ಹೂಡಿ ಕಳೆದುಕೊಂಡ. ಅನಂತರ ವಿನಿಗಾರ್ ಉತ್ಪಾದಿಸುವ ಕಾರ್ಖಾನೆಯನ್ನು ಆರಂಭಿಸಿದ. ಅದು ತಲೆಯೆತ್ತಲಿಲ್ಲ. ಈ ದುಸ್ಸಾಹಸಗಳಿಂದ ಕೂಡಿಬಂದ ಸಾಲಗಳನ್ನು ತೀರಿಸಿ ಚೇತರಿಸಿಕೊಳ್ಳಲು ಸುಮಾರು ಹತ್ತುವರ್ಷಗಳೇ ಬೇಕಾದುವು. ಹಾಗೆಂದು ಈತ ಎದೆಗುಂದಲಿಲ್ಲ. ಕೌತುಕಮಯವಾದ ವೈಜ್ಞಾನಿಕ ರಹಸ್ಯಗಳನ್ನು ಕುರಿತು ಸಾರ್ವಜನಿಕ ಪ್ರವಚನಗಳನ್ನು ಏರ್ಪಡಿಸಿದ. ಆದರೆ ಹಣತೆತ್ತು ಪ್ರವಚನ ಕೇಳಲು ಬಂದವರು ಎಲ್ಲೊ ಕೆಲವು ಮಂದಿ. ಹೀಗೆ ಮೇಲಿಂದ ಮೇಲೆ ಕಷ್ಟನಷ್ಟಗಳಾದರೂ ಬರ್ಝೀಲೀಯಸ್ ಕೈಚೆಲ್ಲಿ ಕುಳಿತುಕೊಳ್ಳಲಿಲ್ಲ. ಈ ವೇಳೆಗಾಗಲೆ ವಿಜ್ಞಾನಿಯಾಗಿ ಇವನ ಕೀರ್ತಿ ಹಬ್ಬಿದ್ದರಿಂದ ಇವನಿಗೆ ವೇತನಸಹಿತ ಹುದ್ದೆಗಳಿಗೆ ಆಹ್ವಾನಗಳು ಬರಲು ಮೊದಲಾಗಿ ಇವನ ಆರ್ಥಿಕ ಸ್ಥಿತಿ ಸುಧಾರಿಸತೊಡಗಿತು.

	ಮುಂದಿನ ದಶಕ ಅವಿಶ್ರಾಂತ ಚಟುವಟಿಕೆಯದು. ಪರಮಾಣುತೂಕಗಳು. ದ್ವೈತವಾದ, ಖನಿಜವಿಜ್ಞಾನ ಮತ್ತು ರಾಸಾಯನಿಕ ಪ್ರತೀಕಗಳನ್ನು ಕುರಿತು ಸಂಶೋಧಿಸಿದ್ದು ಈ ಅವಧಿಯಲ್ಲಿ ಅಂದು ಪರಿಚಿತ ಧಾತುಗಳ ಪ್ರತೀಕಗಳ ಬಗ್ಗೆ ಒಮ್ಮತವಿರಲಿಲ್ಲ. ಇದರಿಂದ ವಿಜ್ಞಾನಿಗಳ ನಡುವೆ ವಿಚಾರವಿನಿಮಯಕ್ಕೆ ತೊಂದರೆಯಾಗಿತ್ತು. ಗ್ರೀಕರು ಸಲಹೆಮಾಡಿದ ಪ್ರತೀಕಗಳು ಒಂದು ಕಡೆ. ಈಜಿಪ್ಟಿಯನ್ನರು ರೂಢಿಗೆ ತಂದಿದ್ದ ಪ್ರತೀಕಗಳು ಇನ್ನೊಂದು ಕಡೆ. ಸಾಲದುದಕ್ಕೆ ಪ್ರಾಚೀನ ರಸವಾದಿಗಳು ಬಳಸುತ್ತಿದ್ದ ವಿಚಿತ್ರ ಗುರುತುಗಳು ಬೇರೆ ಇದ್ದುವು. ಉದಾಹರಣೆಗೆ ಒಂದು ಪುಸ್ತಕದಲ್ಲಿ ಪಾದರಸವನ್ನು ಸೂಚಿಸಲು ಮೂವತ್ತೈದು ಬೇರೆ ಬೇರೆ ಹೆಸರುಗಳನ್ನೂ ಮತ್ತು ಇಪ್ಪತ್ತು ಬಗೆಯ ಪ್ರತೀಕಗಳನ್ನೂ ಉಪಯೋಗಿಸಲಾಗಿತ್ತೆಂದು ಪ್ರತೀತಿ. ಇಂಥ ಪರಿಸ್ಥಿತಿಯಲ್ಲಿ ರಸಾಯನವಿಜ್ಞಾನದ ಪ್ರಗತಿ ಕುಂಠಿತವಾದುದು ಸ್ವಾಭಾವಿಕವೇ. ಆದ್ದರಿಂದ ಇದಕ್ಕೆಲ್ಲ ವೈಜ್ಞಾನಿಕವಾದ ಒಂದು ಪರಿಭಾಷೆಯನ್ನು ಒದಗಿಸುವುದು ತನ್ನ ಆದ್ಯಕರ್ತವ್ಯವೆಂದು ಮನಗಂಡ ಬರ್ಝೀಲಿಯಸ್ ಕಾರ್ಯೋನ್ಮುಖನಾದ. ಅವನ ಸಲಹೆ ಸರಳವಾಗಿತ್ತು. ಪ್ರತಿಯೊಂದು ಧಾತುವನ್ನೂ ಅದರ ಹೆಸರಿನ ಪ್ರಥಮಾಕ್ಷರದಿಂದ ಸೂಚಿಸಿದರಾಯಿತು. ಉದಾಹರಣೆಗೆ ಊ, ಔ, ಓ, ಅ, S, ಃ, ಈ, ಂ, ಗಿ, I ಅನುಕ್ರಮವಾಗಿ ಹೈಡ್ರೊಜನ್, ಆಕ್ಸಿಜನ್, ನೈಟ್ರೊಜನ್, ಕಾರ್ಬನ್ ಸಲ್ಫರ್, ಬೋರಾನ್, ಫ್ಲೂರೀನ್, ಅರ್ಗಾನ್, ವೆನೇಡಿಯಮ್ ಮತ್ತು ಅಯೊಡೀನ್ ಧಾತುಗಳನ್ನು ಸೂಚಿಸುತ್ತವೆ. ಆದರೆ ಒಂದಕ್ಕಿಂತ ಹೆಚ್ಚು ಧಾತುಗಳ ಹೆಸರುಗಳು ಒಂದೇ ಅಕ್ಷರದಿಂದ ಪ್ರಾರಂಭವಾಗುವುದುಂಟು. ಕಾರ್ಬನ್ (ಅ) ಕ್ಲೋರೀನ್ (ಅ) ಕ್ಯಾಲ್ಸಿಯಮ್ (ಅ), ಕ್ಯಾಡ್ಮಿಯಮ್ (ಅ), ಕ್ರೋಮಿಯಮ್ (ಅ), ಕೋಬಾಲ್ಟ್ (ಅ), ಮತ್ತು ತಾಮ್ರ (ಅ) ಇಂಥ ಕೆಲವು ಧಾತುಗಳು. ಈ ಇಕ್ಕಟ್ಟಿನಿಂದ ಪಾರಾಗಲು ಇವುಗಳ ಪೈಕಿ ಒಂದಕ್ಕೆ (ಕಾರ್ಬನ್ನಿಗೆ) ಪ್ರಥಮಾಕ್ಷರವನ್ನು (ಅ) ಮೀಸಲಾಗಿಟ್ಟು ಉಳಿದವುಗಳಿಗೆ ಆಯಾ ಹೆಸರಿನ ಮೊದಲ ಎರಡು ಅಕ್ಷರಗಳನ್ನಾಗಲಿ ಅಥವಾ ಮೊದಲನೆಯ ಮತ್ತು ಎದ್ದುಕಾಣುವ ಇನ್ನೊಂದು ಅಕ್ಷರವನ್ನಾಗಲಿ ಜೋಡಿಸಿ ಪ್ರತೀಕಗಳನ್ನು ಕಲ್ಪಿಸಬಹುದು. ಇದರ ಪ್ರಕಾರ ಅಟ, ಅಚಿ, ಅಜ, ಅo ಮತ್ತು ಅಡಿ ಅನುಕ್ರಮವಾಗಿ ಕ್ಲೋರೀನ್, ಕ್ಯಾಲ್ಸಿಯಮ್, ಕ್ಯಾಡ್ಮಿಯಮ್ ಕೋಬಾಲ್ಟ್ ಮತ್ತು ಕ್ರೋಮಿಯಮ್ ಧಾತುಗಳ ಪ್ರತೀಕಗಳಾಗುತ್ತವೆ. ಕೆಲವು ವೇಳೆ ಧಾತುವಿನ ಲ್ಯಾಟಿನ್ ಹೆಸರಿನಿಂದ ಇದೇ ರೀತಿ ಅಕ್ಷರಗಳನ್ನು ಆಯುವುದು ಯುಕ್ತ. ಉದಾಹರಣೆಗೆ,
ಸೋಡಿಯಮ್ 
ಓಚಿ
(ನ್ಯಾಟ್ರಿಯಮ್)

ಪೊಟಾಸಿಯಮ್
ಏ
(ಕಾಲಿಯಮ್)

ತಾಮ್ರ
ಅu
(ಕ್ಯುಪ್ರಮ್)

ಕಬ್ಬಿಣ
ಈe
(ಫೆರಮ್)

ತವರ
Sಟಿ
(ಸ್ಟಾನ್ನಮ್)

ಪಾದರಸ
ಊg
(ಹೈಡ್ರಾರ್ಜಿರಮ್)

ಬೆಳ್ಳಿ
ಂg
(ಅರ್ಜೆಂಟಮ್)

ಸೀಸ
Pb
(ಪ್ಲಂಬಮ್)

ಚಿನ್ನ
ಂu
(ಆರಮ್)

ಟಂಗ್‍ಸ್ಟನ್
W
(ವೂಲ್‍ಫ್ರಮ್)

ಧಾತುವಿನ ಪ್ರತೀಕ ಎರಡು ಅಕ್ಷರಗಳನ್ನು ಒಳಗೊಂಡಿದ್ದರೆ ಮೊದಲನೆಯದನ್ನು ದೊಡ್ಡ ಅಕ್ಷರದಲ್ಲಿಯೂ ಎರಡನೆಯದನ್ನು ಚಿಕ್ಕ ಆರಕ್ಷರದಲ್ಲಿಯೂ ಬರೆಯಬೇಕು. ಮೇಲಿನ ಉದಾಹರಣೆಗಳಿಂದ ಇದು ಸ್ಪಷ್ಟವಾಗುವುದು. ಸಂಯುಕ್ತದ ಅಣುಗಳನ್ನು ಸೂಚಿಸಲು ಅದರಲ್ಲಿರುವ ಪರಮಾಣುಗಳ ಪ್ರತೀಕಗಳನ್ನು ಒಂದರ ಪಕ್ಕದಲ್ಲೊಂದು ಬರೆದರಾಯಿತು. ಉದಾಹರಣೆಗೆ ನೀರಿನ ಅಣುವನ್ನು ಊಔಊ ಎಂದೂ ಕಾರ್ಬನ್ ಡೈಆಕ್ಸೈಡಿನ ಅಣುವನ್ನು ಔಅಔ ಎಂದೂ ಬರೆಯುವುದು ಬರ್ಝೀಲೀಯಸನ ಕ್ರಮವಾಗಿತ್ತು. ಇವನ್ನು ನಾವು ಇಂದು ಊ2ಔ ಮತ್ತು ಅಔ2 ಎಂದು ಬದಲಾಯಿಸಿಕೊಂಡಿದ್ದೇವೆ, ಅಷ್ಟೆ. ಈ ವಿನೂತನ ಸಲಹೆ ಎಷ್ಟೇ ಗ್ರಾಹ್ಯವಾಗಿದ್ದರೂ ಸಾಂಪ್ರದಾಯಿಕ ಚಿತ್ರಗಳು ಮತ್ತು ಗುರುತುಗಳನ್ನು ಮೈಗೂಡಿಸಿಕೊಂಡಿದ್ದ ಸನಾತನಿಗಳು ಬರ್ಝೀಲೀಯಸನ ಪ್ರತೀಕಗಳನ್ನು ಮಾನ್ಯ ಮಾಡಲು ಹೆಚ್ಚು ಕಾಲ ಹಿಡಿಯಿತು.

	ಮುಂದೆ ಈತ ಗ್ರಂಥರಚನೆಯಲ್ಲಿ ತೊಡಗಿದ. ಅವಿಶ್ರಾಂತ ದುಡಿಮೆಯ ಫಲವಾಗಿ ದಾರುಣವಾದ ತಲೆಶೂಲೆ ಎರಗಿತು. ಆರೋಗ್ಯ ಸುಧಾರಣೆಗಾಗಿ ಪ್ಯಾರಿಸ್ ಪ್ರವಾಸ ಕೈಗೊಂಡ. ತಾನು ಆವಿಷ್ಕರಿಸಿದ್ದ ವಿದ್ಯುದ್ರಾಸಾಯನಿಕ ಸಿದ್ಧಾಂತ ಮತ್ತು ನಿಯತಪ್ರಮಾಣ ನಿಯಮದ ವಿಷಯ ಪ್ಯಾರಿಸಿನವರಿಗೆ ಗೊತ್ತಿಲ್ಲದಿರುವುದನ್ನು ಕಂಡು ಇವನ್ನು ಅಲ್ಲಿ ಪ್ರಚುರಪಡಿಸಿದ. ಖನಿಜ ವರ್ಗೀಕರಣ ಪದ್ಧತಿಯನ್ನು ಫ್ರೆಂಚ್ ಭಾಷೆಗೆ ತರ್ಜುಮೆ ಮಾಡಿಸಿದನಲ್ಲದೆ ಊದುಗೊಳವೆಯ ಬಳಕೆಯಲ್ಲೂ ಶಿಕ್ಷಣ ನೀಡಿದ. ಡ್ಯೂಲಾಂಗನ ಸಹಚರ್ಯೆಯಲ್ಲಿ ಹೈಡ್ರೊಜನ್, ನೈಟ್ರೊಜನ್ ಮತ್ತು ಕಾರ್ಬನ್ನುಗಳ ಪರಮಾಣು ತೂಕಗಳನ್ನು ಪರಿಷ್ಕರಿಸಿ ಆಕ್ಸಿಜನ್, ನೈಟ್ರೊಜನ್ ಮತ್ತು ಕಾರ್ಬನ್ ಡೈಆಕ್ಸೈಡುಗಳ ಸಾಂದ್ರತೆಯನ್ನು ಕುರಿತ ಪ್ರಯೋಗಗಳನ್ನು ಮಾಡಿದ. ಪ್ಯಾರಿಸಿನಲ್ಲಿ ಈತ ಸಂದರ್ಶಿಸಿದ ಪ್ರಯೋಗ ಶಾಲೆಗಳ ಮಟ್ಟಕ್ಕೆ ತನ್ನ ಪ್ರಯೋಗ ಶಾಲೆಯನ್ನೂ ಸಜ್ಜುಗೊಳಿಸುವ ಉದ್ದೇಶದಿಂದ ಅನೇಕ ಉಪಕರಣಗಳು ಮತ್ತು ಸಲಕರಣೆಗಳನ್ನು ಜೊತೆಯಲ್ಲಿ ಒಯ್ದನಂತೆ. ಫ್ರಾನ್ಸಿನ ಗ್ರಾಮಾಂತರ ಪ್ರದೇಶವನ್ನೆಲ್ಲ ಸುತ್ತಿ ಭೂವೈಜ್ಞಾನಿಕ ಮಾಹಿತಿಯನ್ನು ಕಲೆಹಾಕಿದ.

	ವಯಸ್ಸಾದಂತೆ ಬರ್ಝೀಲೀಯಸನ ಮನಸ್ಸು ವೈವಾಹಿಕ ಜೀವನದ ಕಡೆ ವಾಲಿತು. ತಾರುಣ್ಯದಲ್ಲಿ ಅವನು ತನ್ನ ಸಂಶೋಧನೆಗಳಲ್ಲಿ ಎಷ್ಟು ತಲ್ಲೀನನಾಗಿದ್ದನೆಂದರೆ ಸಾಂಸಾರಿಕ ಜೀವನವನ್ನು ಕುರಿತು ಯೋಚಿಸಲು ಅವನಿಗೆ ಬಿಡುವಿರಲಿಲ್ಲ. ಐವತ್ತಾರನೆಯ ಪ್ರಾಯದಲ್ಲಿ ಸ್ನೇಹಿತನ ಮಗಳಾದ ಇಪ್ಪತ್ತನಾಲ್ಕರ ಹರೆಯದ ಜೋಡನ್ ಎಲಿಜಬೆತ್ ಪಾವಿಯಸ್ ಎಂಬವಳನ್ನು ಲಗ್ನವಾದ. ಬ್ಯಾರನ್ ಪ್ರಶಸ್ತಿಯೂ ಪ್ರಾಪ್ತವಾಯಿತು. ವೈಜ್ಞಾನಿಕ ಬರವಣಿಗೆ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಜೀವನ ಸಂಧ್ಯೆ ಕಳೆಯಿತು.

	ರಸಾಯನವಿಜ್ಞಾನಕ್ಕೆ ಬರ್ಝೀಲೀಯಸನ ಕೊಡುಗೆ ಮೂರು ಬಗೆಯದು :  (i) ರಾಸಾಯನಿಕ ಜ್ಞಾನ ಪ್ರಸಾರ, (ii) ತಾತ್ತ್ವಿಕ ಕೊಡುಗೆ, ಮತ್ತು (iii) ಪ್ರಾಯೋಗಿಕ ಅಧ್ಯಯನ. ಇವನು ಹುಟ್ಟಾಸಾಹಿತಿ. ವಿದ್ಯುದ್ರಾಸಾಯನಿಕ ಸಂಶೋಧನೆಗಳನ್ನು ಒಳಗಂಡ ಇವನ ಮೊದಲ ಪ್ರಕಟಣೆ ಬಂದದ್ದು 1802ರಲ್ಲಿ. ಇವನು ಸುಮಾರು 250 ಪ್ರಬಂಧಗಳನ್ನೂ ಅನೇಕ ಗ್ರಂಥಗಳನ್ನೂ ಬರೆದಿದ್ದಾನೆ. ಸ್ವೀಡಿಷ್ ಭಾಷೆಯಲ್ಲಿ ವೈದ್ಯಕೀಯ ರಸಾಯನವಿಜ್ಞಾನವನ್ನು ಕುರಿತ ಗ್ರಂಥಗಳು ಇಲ್ಲದಿದ್ದುದರಿಂದ ಶಾರೀರಿಕ ರಸಾಯನವಿಜ್ಞಾನದ (ಫಿಸಿಯಲಾಜಿಕಲ್ ಕೆಮಿಸ್ಟ್ರಿ) ಪುಸ್ತಕವೊಂದನ್ನು ಬರೆದ. 1806ರಲ್ಲಿ ಪ್ರಾಣಿರಸಾಯನವಿಜ್ಞಾನದ ಮೊದಲ ಭಾಗವನ್ನೂ ಎರಡು ವರ್ಷಗಳ ಬಳಿಕ ಎರಡನೆಯ ಭಾಗವನ್ನೂ ಪ್ರಚುರಪಡಿಸಿದ.  ಹಾಲು ರಕ್ತಮೂಳೆ ಮತ್ತು ಪಿತ್ತರಸಗಳ ಬಗ್ಗೆ ನಡೆಸಿದ್ದ ಸಂಶೋಧನೆಗಳ ಪೂರ್ಣಪಾಠ ಅವುಗಳಲ್ಲಿತ್ತು. ಆಗ ಸ್ವೀಡನ್ನಿನಲ್ಲಿ ಬಳಕೆಯಲ್ಲಿದ್ದ ಜರ್ಮನ್ ಭಾಷೆಯ ಪಠ್ಯಪುಸ್ತಕಗಳು ಪರಿಪೂರ್ಣವಾಗಿರಲಿಲ್ಲ. ಆದ್ದರಿಂದ 1808ರಲ್ಲಿ ಇವನು ಒಂದು ಪಠ್ಯಪುಸ್ತಕವನ್ನು ಪ್ರಕಟಿಸಿದ. ಮೊದಲನೆಯ ಭಾಗ ಪ್ರಕಟವಾಗುವ ವೇಳೆಗೆ ಸರಿಯಾಗಿ ಡೇವಿ ಕ್ಷಾರಲೋಹಗಳು ಮತ್ತು ಕ್ಷಾರಭಸ್ಮ ಲೋಹಗಳನ್ನು ಬೇರ್ಪಡಿಸಿದ. ಅಲ್ಲದೆ ಆಗ ಡಾಲ್ಟನ್ನನ ಪರಮಾಣುವಾದದ ವರದಿಗಳು ಪ್ರಕಾಶಿತವಾದುವು. ಇವನ್ನು ಗಮನದಲ್ಲಿಟ್ಟುಕೊಂಡು ಬರ್ಝೀಲೀಯಸ್ ತನ್ನ ಪುಸ್ತಕದ ಮೊದಲನೆಯ ಭಾಗವನ್ನು ಪರಿಷ್ಕರಿಸಿದುದಲ್ಲದೆ ಗ್ರಂಥದ ಎರಡು ಮತ್ತು ಮೂರನೆಯ ಭಾಗಗಳನ್ನೂ ಬರೆದ. ಇವನ ಪಠ್ಯಪುಸ್ತಕ ತುಂಬ ಜನಪ್ರಿಯವಾಯಿತು. ಬರ್ಝೀಲೀಯಸ್ ಕಾಲವಾಗುವ ಹೊತ್ತಿಗೆ ಆ ಗ್ರಂಥದ ಐದು ಆವೃತ್ತಿಗಳು ಹೊರಬಿದ್ದಿದ್ದುವು. ಅದು ಇತರ ಭಾಷೆಗಳಿಗೂ ಅನುವಾದಿತವಾಗಿತ್ತು. ಊದುಗೊಳವೆ ಪ್ರಯೋಗಗಳಿಗೆ ಸಂಬಂಧಿಸಿದ ಒಂದು ಕೈಪಿಡಿಯನ್ನು ಹೊರತಂದ. ಖನಿಜವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿದ್ದ ಸಂಶೋಧನೆಗಳಿಗೆ ಮೀಸಲಾದ ಒಂದು ನಿಯತಕಾಲಿಕವನ್ನು ಪ್ರಾರಂಭಿಸಿದ. ಸ್ವೀಡಿಷ್ ವಿಜ್ಞಾನ ಅಕ್ಯಾಡಮಿಯ ಕೋರಿಕೆಯನ್ನು ಮನ್ನಿಸಿ ವಾರ್ಷಿಕ ಸಮೀಕ್ಷೆಗಳನ್ನು ಕೊಡಲಾರಂಭಿಸಿದ. ವಿಜ್ಞಾನಕ್ಷೇತ್ರದಲ್ಲಿ ಆಗಿಂದಾಗ್ಗೆ ಪ್ರಕಟವಾಗುತ್ತಿದ್ದ ಎಲ್ಲ ಸಂಶೋಧನೆಗಳ ವರದಿಗಳನ್ನು ತರಿಸಿಕೊಂಡು ನಿರ್ದಾಕ್ಷಿಣ್ಯ ವಿಮರ್ಶೆಗಳನ್ನು ಪ್ರಕಟಿಸುತ್ತಿದ್ದ. ಇವನ ರಚನಾತ್ಮಕ ಟೀಕೆಗಳಿಂದ ರಸಾಯನವಿಜ್ಞಾನದ ಪ್ರಗತಿಗೆ ಮಹದುಪಕಾರವಾಗಿದೆ.

	1832ರ ವಾರ್ಷಿಕ ಸಮೀಕ್ಷೆಯಲ್ಲಿ ಒಂದೇ ಅಣುಸೂತ್ರವುಳ್ಳ ವಿವಿಧ ಸಂಯುಕ್ತಗಳ ಬಗ್ಗೆ ಪ್ರಸ್ತಾಪವಿತ್ತು. ಅಲ್ಲಿಯ ತನಕ ಒಂದು ಸಂಯುಕ್ತಕ್ಕೆ ಒಂದು ಸಂಯೋಜನೆಯೇ ವಿನಾ ಬೇರೊಂದು ಸಂಯುಕ್ತವೂ ಅದೇ ಸಂಯೋಜನೆಯನ್ನು ಹೊಂದಿರಲು ಸಾಧ್ಯವಿಲ್ಲ ಎಂಬ ಭಾವನೆಯಿತ್ತು. ಒಂದೇ ಸಂಯೋಜನೆಯುಳ್ಳ ಆದರೆ ಭಿನ್ನ ರಾಸಾಯನಿಕ ಗುಣಗಳಿರುವ ಸಂಯುಕ್ತಗಳುಂಟೆಂದು ಬರ್ಝೀಲೀಯಸ್ ಪ್ರತಿಪಾದಿಸಿದ. ತವರದ ಎರಡು ಆಕ್ಸೈಡುಗಳಿಗೆ ಒಂದೇ ಸೂತ್ರವಿದ್ದು ಗುಣಗಳಲ್ಲಿ ಮಾತ್ರ ಭಿನ್ನವಾಗಿದ್ದುದನ್ನು ಅವನು ಗಮನಿಸಿದ್ದ. ಅನುಕ್ರಮವಾಗಿ ಫಲ್ಮಿನಿಕ್ ಮತ್ತು ಸಯನಿಕ್ ಆಮ್ಲಗಳನ್ನು ಕುರಿತ ಲೀಬಿಗ್ ಮತ್ತು ವ್ಹೋಲರರ ಪ್ರಯೋಗಗಳು ಈ ವಾದವನ್ನು ಪುಷ್ಟೀಕರಿಸಿದುವು. ಫ್ಯಾರಡೆ ಕಂಡುಹಿಡಿದಿದ್ದ ಬ್ಯುಟೈಲೀನ್ (ಅ4ಊ8) ಅನಿಲದ ಸಂಯೋಜನೆ ಎಥಿಲೀನ್ (ಅ2ಊ4) ಅನಿಲದ ಸಂಯೋಜನೆಯಂತಿತ್ತು. ಬ್ಯುಟೈಲೀನಿನ ಸಾಂದ್ರತೆ ಮಾತ್ರ ಎಥಿಲೀನಿನ ಸಾಂದ್ರತೆಯ ಎರಡರಷ್ಟಿತ್ತು, ಅಷ್ಟೇ ವ್ಯತ್ಯಾಸ. ಮತ್ತಿತರ ಸಂದರ್ಭಗಳಲ್ಲಿ ಇಂಥ ವ್ಯತ್ಯಾಸಗಳೂ ಇರದೆ ನಾಲ್ಕಾರು ಸಂಯುಕ್ತಗಳನ್ನು ಒಂದೇ ಅಣುಸೂತ್ರದಿಂದ ಸೂಚಿಸಬಹುದಾಗಿತ್ತು. ಈ ತೆರನಾದ ಸಂಯುಕ್ತಗಳನ್ನು ಐಸೊಮರ್ (ಸಮಾಂಗಿ)ಗಳೆಂದೂ ಈ ಗುಣಧರ್ಮಕ್ಕೆ ಐಸೊಮೆರಿಸಮ್ (ಸಮಾಂಗತೆ) ಎಂದೂ ಹೆಸರಿಟ್ಟ. ಇಂದಿಗೂ ಇವೇ ಪದಗಳನ್ನು ಉಪಯೋಗಿಸುತ್ತಿದ್ದೇವೆ.

	ಮತ್ತೊಂದು ವಾರ್ಷಿಕ (1836) ಸಮೀಕ್ಷೆಯಲ್ಲಿ ರಾಸಾಯನಿಕ ಕ್ರಿಯೆಗಳ ವೇಗವನ್ನು ವ್ಯತ್ಯಾಸಮಾಡಬಲ್ಲ ಹೊಸ ಬಲವೊಂದರ ಉಲ್ಲೇಖವಿತ್ತು. ಕೆಲವೊಂದು ಸಂದರ್ಭಗಳಲ್ಲಿ ಬೇರೊಂದು ವಸ್ತುವನ್ನು ಲೇಶಮಾತ್ರ ಬಳಸಿದರೂ ಸಾಕು. ರಾಸಾಯನಿಕ ಕ್ರಿಯಾವೇಗ ಗಣನೀಯವಾಗಿ ಹೆಚ್ಚುವುದು ಇಲ್ಲವೆ ತಗ್ಗುವುದು. ಈ ಕ್ರಿಯಾವರ್ಧಕ ಅಥವಾ ಕ್ರಿಯಾಮಂದಕ ಕ್ರಿಯಾಕಾಲದಲ್ಲಿ ನಿರ್ಲಿಪ್ತನಾಗಿರುವಂತೆ ಭಾಸವಾಗಿ ಅಂತಿಮವಾಗಿ ಯಾವ ಬದಲಾವಣೆಯನ್ನೂ ಹೊಂದದೆ ಉಳಿದಿರುವುದು ಎಂದು ಬರ್ಝೀಲೀಯಸ್ ತೋರಿಸಿದ. ಅಂಥ ವಸ್ತುಗಳೇ ಕ್ಯಾಟಲಿಸ್ಟುಗಳು. ಇದೂ ಇವನಿಟ್ಟ ಹೆಸರೇ.

	ಈತ ನಡೆಸಿದ ಹಲವಾರು ಪ್ರಯೋಗಗಳ ಪೈಕಿ ಸಿಲಿಕಾನ್, ಟೈಟೇನಿಯಮ್ ಮತ್ತು ಸಿರ್ಕೋನಿಯಮ್ ಧಾತುಗಳ ಬೇರ್ಪಡೆ, ನೈಟ್ರೊಜನ್ ಆಕ್ಸೈಡುಗಳ ಅಧ್ಯಯನ, ವೆನೇಡಿಯಮ್ ಮತ್ತು ಮಾಲಿಬ್ಡಿನಮ್ ಸಂಯುಕ್ತಗಳು, ಬೋರಾನ್ ಮತ್ತು ಸಿಲಿಕಾನ್ ಹ್ಯಾಲೈಡುಗಳು, ಫೆರೊಸಯನೈಡುಗಳು ಮತ್ತು ಕಾರ್ಬನ್ ಡೈಸಲ್ಛೈಡುಗಳನ್ನು ಕುರಿತ ಪರಿಶೀಲನೆ ಮೊದಲಾದವನ್ನು ಹೆಸರಿಸಬಹುದು. ಪ್ರಯೋಗ ಉಪಕರಣಗಳಿಗೆ ರಬ್ಬರ್ ನಾಳಗಳ ಜೋಡಣೆ, ರಾಸಾಯನಿಕ ವಿಶ್ಲೇಷಣೆಯಲ್ಲಿ ಸೋಸುಕಾಗದದ ಉಪಯೋಗ ಮತ್ತು ನಿಖರ ಲೆಕ್ಕಾಚಾರಗಳಲ್ಲಿ ಅದರ ಬೂದಿಯ ತೂಕಾಂಶ ನಿರ್ಣಯ ಮೊದಲಾದ ಸುರಕ್ಷಣೆಗಳನ್ನು ಆಚರಣೆಗೆ ತಂದವನು ಬರ್ಝೀಲೀಯಸ್.

	ಧಾತುಗಳು ಪರಸ್ಪರ ಸಂಯೋಗಿಸುವ ತೂಕ ಪ್ರಮಾಣಗಳನ್ನು ನಿರ್ಣಯಿಸಿ ಅವುಗಳಿಂದ ಪರಮಾಣು ತೂಕಗಳ ನಿರ್ಧಾರಕ್ಕೆ ದಾರಿಮಾಡಿದುದು ಇವನ ಮಹತ್ಸಾಧನೆಗಳಲ್ಲೊಂದು, ಸಮಾನ ತೂಕಗಳನ್ನು ಕುರಿತ ರಿಕ್ಟರನ ಪ್ರಯೋಗಗಳು ಮತ್ತು ಡಾಲ್ಟನನ ಪರಮಾಣು ವಾದಗಳಿಂದ ಮೋಹಿತನಾದ ಬರ್ಝೀಲೀಯಸನಿಗೆ ಈ ಸಿದ್ಧಾಂತಗಳನ್ನು ಬೆಳೆಸಬೇಕಾದರೆ ವಿಶ್ಲೇಷಕ ತಂತ್ರಗಳು ನಿಖರವಾಗಿರಬೇಕು, ಹಾಗಿದ್ದರೆ ಮಾತ್ರ ಫಲಿತಾಂಶಗಳನ್ನು ನೆಚ್ಚಬಹುದು ಎಂದು ಮನವರಿಕೆಯಾಗಿ ಅಂಥ ವಿಶ್ವಸನೀಯ ಅಂಕೆ ಅಂಶಗಳನ್ನು ಸಂಗ್ರಹಿಸತೊಡಗಿದ. 1807-17ರ ಅವಧಿಯಲ್ಲಿ 43 ಧಾತುಗಳ ಸಂಯುಕ್ತಗಳನ್ನು ವಿಶ್ಲೇಷಿಸಿ ಅವುಗಳ ಸಂಯೋಜನೆಯನ್ನು ಕುರಿತು ವ್ಯಾಪಕ ಪ್ರಯೋಗಗಳನ್ನು ನಡೆಸಿದನೆಂದು ಪ್ರತೀತಿ. ಸುಮಾರು 2000 ಸಂಯುಕ್ತಗಳನ್ನು ತಯಾರಿಸಿ ಶುದ್ಧಿಗೊಳಿಸಿ ವಿಶ್ಲೇಷಿಸಿದನೆಂದರೆ ಅಚ್ಚರಿಯಾದೀತು. ಇಷ್ಟು ಶ್ರಮವಹಿಸಿ ಈತ ನಿರ್ಣಯಿಸಿದ ಸಮಾನತೂಕಗಳು ಪ್ರಚಲಿತ ಮೌಲ್ಯಗಳಿಗೆ ಸಾಟಿಯಾಗಿವೆ. ಇದರಿಂದ ಈತ ನಿಯತಪ್ರಮಾಣ ನಿಯಮ ಮತ್ತು ಗಣಿತನುಪಾತ ನಿಯಮಗಳ ಯಥಾರ್ಥತೆಯನ್ನು ರುಜುವಾತುಪಡಿಸಿದ.

	ಪರಮಾಣು ತೂಕಗಳ ಪರಿಷ್ಕರಣ ಬರ್ಝೀಲೀಯಸ್ ಮಾಡಿದ ಮುಂದಿನ ಕೆಲಸ. ಇವನು ಕೊಟ್ಟ ಪರಮಾಣು ತೂಕಗಳ ಪಟ್ಟಿ ಪರಿಪೂರ್ಣವಾಗಿತ್ತು. ಎನ್ನಬಹುದು. ಅಲ್ಪಸ್ವಲ್ಪ ತಿದ್ದುಪಡಿ ಮಾಡಬೇಕಿತ್ತು. ಅಷ್ಟೆ, ನಿದರ್ಶನವಾಗಿ ಕೆಳಗಿನ ಪಟ್ಟಿಯನ್ನು ನೋಡಬಹುದು:

ಧಾತು
ಪರಮಾಣು ತೂಕ ಡಾಲ್ಟನ್, 1808
ಪರಮಾಣು ತೂಕ ಬರ್ಝೀಲೀಯಸ್, 1826
ಪರಮಾಣು ತೂಕ ಇಂದಿನ ಮೌಲ್ಯ

ತಾಮ್ರ
56
63
63.54

ಸೀಸ
95
207.12
207.21

ನೈಟ್ರೊಜನ್
5
14.05
14.008

ಗಂಧಕ
13
32.18
32.066

	ಆಧುನಿಕ ಸೌಕರ್ಯಗಳಿಲ್ಲದ ಪುರಾತನ ಪ್ರಯೋಗಶಾಲೆಯಲ್ಲಿ ಅಶುದ್ಧ ರಾಸಾಯನಿಕಗಳೊಡನೆ ವ್ಯವಹರಿಸಬೇಕಾಗಿದ್ದ ಬರ್ಝೀಲೀಯಸ್ ಈ ನಿಖರತೆಯನ್ನು ಸಾಧಿಸಿದ್ದು ಅವನ ಪ್ರಯೋಗ ಕೌಶಲಕ್ಕೆ ಸಾಕ್ಷಿ. ತನ್ನ ಮನೆಯನ್ನು ಪ್ರಯೋಗಶಾಲೆಯಾಗಿ ಪರಿವರ್ತಿಸಿ ಹತ್ತೊಂಬತ್ತನೆಯ ಶತಮಾನದ ಪ್ರಮುಖ ಸ್ವೀಡಿಷ್ ವಿಜ್ಞಾನಿಗಳಿಗೆ ಅಲ್ಲಿ ಕೆಲಸಮಾಡಲು ಎಡೆಗೊಟ್ಟ ಈ ಬುದ್ಧಜೀವಿಯ ಔದಾರ್ಯ ಚಿರಸ್ಮರಣೀಯ. ಬರ್ಝೀಲೀಯಸನ ಕಾಲಾನಂತರ ಅವನಂತೆ ರಸಾಯನವಿಜ್ಞಾನದ ಶಾಖೋಪಶಾಖೆಗಳಲ್ಲೆಲ್ಲ ಕೈಯಾಡಿಸಿ ಅಮೂಲ್ಯ ಸಂಶೋಧನೆಗಳನ್ನು ಮಾಡಬಲ್ಲ ಮತ್ತೊಬ್ಬ ವಿಜ್ಞಾನಿ ಹುಟ್ಟಲಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.		
				(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ